ದೇವರ ಸೇವೆಗಳು -
ಧಾರ್ಮಿಕ ಜೀವನ ಭಗವಂತ ಇದ್ದಾನೆ ಎಂಬ ದೃಢ ನಂಬಿಕೆಗೆ ಬದ್ದವಾಗಿದೆ. ಸಾಂಪ್ರದಾಯಿಕ ಸಾಕ್ಷ್ಯಗಳ ಆಧಾರದಿಂದ ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿರುವ ಆಸ್ತಿಕ ಜನರಲ್ಲಿ ಕೆಲವರು ದೇವರನ್ನು ಅತೀಂದ್ರಿಯ ಶಕ್ತಿಯೆಂದು ಭಾವಿಸಿದರೆ ಮತ್ತೆ ಕೆಲವರು ಆ ಅಮೂರ್ತ ಸ್ವರೂಪದ ಶಕ್ತಿಯನ್ನು ವಿವಿಧ ಆಕಾರಗಳಲ್ಲಿ ಪ್ರತಿಮೀಕರಿಸಿ ಆರಾಧಿಸುತ್ತಾರೆ. ಹೀಗಾಗಿ ಋತಶಕ್ತಿಯನ್ನು ಮೂರ್ತಿಕರಿಸಿದ್ಧಲ್ಲದೆ ಅವುಗಳೆಲ್ಲ ಮನುಷ್ಯಾಕಾರವನ್ನೇ ಹೆಚ್ಚಾಗಿ ಅನುಕರಿಸಿವೆ. ವೇದಗಳ ಕಾಲದಿಂದಲೂ ಸಿಂಧು ಕಣಿವೆಯ ಸಂಸ್ಕøತಿಯ ಕಾಲದಿಂದಲೂ ದೇವರನ್ನು ಮೂರ್ತಿಸ್ವರೂಪದಲ್ಲಿ ಆರಾಧಿಸುವ ಕ್ರಮ ಕಂಡು ಬಂದಿದೆ. ದೇವರಿಗೂ ಮನುಷ್ಯತ್ವಾರೋಪಣೆ ಮಾಡಿದ್ದರ ಪರಿಣಾಮವಾಗಿ ಅವನೂ ನಮ್ಮಂತೆ ಉಡುತ್ತಾನೆ ತೊಡುತ್ತಾನೆ ತಿನ್ನುತ್ತಾನೆ ಉಣ್ಣುತ್ತಾನೆ. ಎಂದು ಭಾವಿಸಿ ತನಗೆ ಪ್ರಿಯವಾದ ಎಲ್ಲ ಭೋಗವಸ್ತುಗಳನ್ನು ಅವನಿಗೂ ಒಪ್ಪಿಸಿ ಸೇವೆ ಸಲ್ಲಿಸುವ ಕ್ರಮ ಎಲ್ಲ ಜನಾಂಗಗಳಲ್ಲೂ ಕಂಡುಬಂದಿದೆ. 

ದೇವರಿಗೆ ಸೇವೆಯನ್ನು ಸಲ್ಲಿಸಲು ಮೊದಲ ಕಾರಣ ನಂಬಿಕೆ-ದೇವರ ಅಸ್ತಿತ್ವದಲ್ಲಿ ನಂಬಿಕೆ, ದೇವರನ್ನು ಕುರಿತ ಪುರಾಣ ಕಥೆಗಳಲ್ಲಿ ನಂಬಿಕೆ. ಧರ್ಮದಲ್ಲಿ ನಂಬಿಕೆ, ಎರಡನೆಯದು ಸುಮಧುರ ಪ್ರಕೃತಿ ವಿಶೇಷಗಳನ್ನೆಲ್ಲ ಕರುಣಿಸಿದ ಪರಮಾತ್ಮನನ್ನು ಕೃತಜ್ಞತೆಯಿಂದ ಸ್ಮರಿಸಿ ವಿವಿಧ ರೂಪಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುವುದು. ಮೂರನೆಯದು ಭಯ. ಪ್ರಕೃತಿಯಲ್ಲುಂಟಾದ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಅಗ್ನಿಪರ್ವತಗಳ ಸ್ಫೋಟನೆ. ಕ್ರೂರ ಪ್ರಾಣಿಗಳ ಪೀಡನೆ, ಅತಿಮಾನುಷ ದೈತ್ಯಶಕ್ತಿಗಳ ಕಿರುಕುಳ, ಇತರ ಪ್ರಾಕೃತಿಕ ಅಲ್ಲೋಲ ಕಲ್ಲೋಲಗಳಿಗೆಲ್ಲ ದೇವರ ವಿಕೋಪವೇ ಕಾರಣವೆಂದು ಭಾವಿಸಿ ಭಯಭಕ್ತಿಯಿಂದ ಆತನನ್ನು ಆರಾಧಿಸಿ ಸೇವೆಯನ್ನು ಸಲ್ಲಿಸುವುದು. ಇವು ಪ್ರಧಾನ ಕಾರಣಗಳು. ದೇವರ ಸೇವೆಗಳು ಪರಪಂಪರೆಯಿಂದ ಬಂದ ಕ್ರಮದ ರೀತಿಯಲ್ಲೇ ನಡೆಯುತ್ತವೆ; ಭಯ ಭಕ್ತಿ ಶ್ರದ್ದೆಗಳಿಂದ ಯಾವ ದೋಷವೂ ತಟ್ಟದಂತೆ ಕಟ್ಟೆಚ್ಚರದಿಂದ ಆಚರಿಸಲ್ಪಡುತ್ತವೆ. ದೇವರನ್ನು ಪ್ರಸನ್ನಗೊಳಿಸಿಕೊಳ್ಳುವುದಕ್ಕಾಗಿ ಪವಿತ್ರ ಉದ್ದೇಶಗಳಿಗಾಗಿ ನಡೆಸುವ ಈ ಸೇವೆಗಳು ಧಾರ್ಮಿಕ ಆಚರಣೆಯ ದೊಡ್ಡ ಭಾಗಗಳಾಗಿವೆ. ಅಲ್ಲದೆ ಹರಕೆಗಳೊಡನೆಯೂ ಇವುಗಳ ಸಂಬಂಧ ಹೆಣೆದುಕೊಂಡಿವೆ. ಕೆಲವು ಸೇವೆಗಳು ಕೆಲವೇ ವ್ಯಕ್ತಿಗಳು ಅಥವಾ ಮನೆತನಗಳು ನಡೆಸುವಂಥಹವುಗಳಾಗಿರುತ್ತವೆ. ಕೆಲವು ತೀರ ವೈಯಕ್ತಿಕವಾದರೆ ಮತ್ತೆ ಕೆಲವು ಸಾಮೂಹಿಕವಾಗಿ ನಡೆಸುವಂಥವಾಗಿರುತ್ತವೆ. ಸೇವೆಗಳನ್ನು ಸ್ತ್ರೀಯರು ಮಾತ್ರ ಮತ್ತೆ ಕೆಲವು ಸೇವೆಗಳನ್ನು ಪುರುಷರು ಮಾತ್ರ ಮಾಡುವಂಥವಾಗಿರುತ್ತವೆ. ಎಲ್ಲ ಸೇವೆಗಳೂ ತಲೆತಲಾಂತರದಿಂದ ನಡೆದುಕೊಂಡು ಬರುತ್ತಿದ್ದರೂ ಕೆಲವಕ್ಕೆ ವಿವರಣೆಯನ್ನು ಕೊಡುವ ಪುರಾಣ ಕಥೆಗಳಿವೆ. ಮತ್ತೆ ಕೆಲವು ಸಾಂಪ್ರದಾಯಿಕವಾಗಿ ಉಳಿದುಕೊಂಡು ಬಂದಿವೆ. ಅಥವಾ ಅವುಗಳಿಗೆ ಸಂಬಂಧಿಸಿದ ಉದ್ದೇಶ ವಿವರಣೆ ಅಥವಾ ಪುರಾಣ ಕಥೆ ಮರೆತುಹೋಗಿದೆ. ಕೆಲವು ಸೇವೆಗಳು ಸರಳ ರೂಪವಾದರೆ ಮತ್ತೆ ಕೆಲವು ಕಷ್ಟಕರವಾದವು ಅಥವಾ ಅಮಾನುಷ ರೀತಿಯವು ಎಂದು ಹೇಳಬಹುದು. ವಿವಿಧ ಜನಾಂಗಗಳಲ್ಲಿ ವಿವಿಧ ರೀತಿಯ ವಿಶಿಷ್ಟವಾದ ಸೇವೆಗಳು ದೇವರಿಗೆ ಸಲ್ಲಿಸುತ್ತವೆ. ಆದರೆ ನಿಃಸ್ವಾರ್ಥಪರರಾಗಿ ನಿಷ್ಕಾಮದಿಂದ ಸೇವೆಸಲ್ಲಿಸುವವರ ಸಂಖ್ಯೆ ತೀರ ವಿರಳವೆಂದೇ ಹೇಳಬೇಕು.

ತೀರ ವೈಯಕ್ತಿಕವಾದ ಸೇವೆಗಳು ಸೇವೆ ಸಲ್ಲಿಸುವವನ ಆತ್ಮವೃತ್ತಕ್ಕೆ ಸಂಬಂಧಿಸಿದವಾದ್ದರಿಂದ ಅದು ಪ್ರದರ್ಶಿತವಾಗುವು ಅವಕಾಶ ಕಡಿಮೆ. ಇದು ಇದ್ದರೂ ಇಲ್ಲದಂತೆ ಕಾಣಿಸಿಕೊಳ್ಳುವ ಅಂತರಂಗ ಶುದ್ಧಿಯುಳ್ಳ ಭಕ್ತಶಿರೋಮಣಿಗಳ ಮಾರ್ಗ ಅವರು ಮಾಡಿದ ದಾನ, ಧರ್ಮ, ಜಪ, ತಪ ಮುಂತಾದವುಗಳೆಲ್ಲ ದೇವರ ಪ್ರೀತ್ಯರ್ಥವಾಗಿ ಮಾಡಿದ ವಿಶಿಷ್ಟ ಸೇವೆಗಳಾಗಿವೆ. ಇವುಗಳ ಆಚರಣಕ್ರಮ ಸರಳವಾದರೂ ಸುಲಭವಲ್ಲ.

ಹಬ್ಬ ಹರಿದಿನಗಳಲ್ಲಿ ತೆಪ್ಪ ತಿರುನಾಳುಗಳಲ್ಲಿ ಜಾತ್ರೆ ಉತ್ಸವಗಳಲ್ಲಿ ದೇವರ ಸೇವೆಗಳು ನಡೆಯುವ ರೀತಿ ವೈವಿಧ್ಯಮಯವಾಗಿರುತ್ತವೆ. ವರ್ಣರಂಜಿತವಾಗಿರುತ್ತವೆ.

ಭಕ್ತರು ತಮ್ಮಲ್ಲಿ ಯಾರಿಗಾದರೂ ಕಾಯಿಲೆ ಕಸಾಲೆಗಳು ಬಂದಾಗ, ಕಷ್ಟ ನಷ್ಟಗಳು ಸಂಭವಿಸಿದಾಗ, ತಮ್ಮ ಇಷ್ಟಾರ್ಥ ಸಿದ್ದಿಸಿಯೇ ತೀರಬೇಕು ಎನಿಸಿದಾಗ ಅಸಹಾಯಕರವಾದ ಅವರು ದೈವೀಶಕ್ತಿಯನ್ನು ಮರೆಹೋಗುತ್ತಾರೆ. ಆ ದೈವೀಶಕ್ತಿ ತಮಗೆ ನೆರವಾದರೆ ಅದಕ್ಕೆ ಪ್ರತಿಯಾಗಿ ಇಂತಿಂಥ ಸೇವೆಗಳನ್ನು ಸಲ್ಲಿಸುವುದಾಗಿ ಹರಕೆಗಳನ್ನು ಹೊರುತ್ತಾರೆ. ರೋಗರುಜಿನಗಳು ಹೇಳಹೆಸರಿಲ್ಲದಂತಾದರೆ ಕಷ್ಟ ನಷ್ಟಗಳು ಪರಿಹಾರವಾದರೆ ಇಷ್ಟಾರ್ಥಗಳು ಸಿದ್ಧಿಸಿದರೆ ಅವು ನೆರೆವೇರಲು ಕಾರಣವಾದ ಲೌಕಿಕ ಶ್ರಮಕ್ಕೆ ದೈವೀಶಕ್ತಿಯ ಕೃಪೆಯನ್ನು ಒಪ್ಪಿ, ಹೊತ್ತ ಹರಕೆಯಂತೆ ದೇವರುಗಳಿಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಬಡವಬಲ್ಲಿದರಲ್ಲಿ ಈ ಹರಕೆಗಳ ಸೇವೆಗಳ ಸ್ಥಾನಮಾನಗಳಲ್ಲಿ ಏರಿಳಿತ ಕಂಡರೂ ಅವುಗಳಲ್ಲಿ ಬಡವನ ಸೇವೆ ಶ್ರೀಮಂತನ ಸೇವೆಗಿಂತ ಹೆಚ್ಚು ಅಥವಾ ಕಡಿಮೆಯೆಂಬ ಭೇದ ಭಾವಕ್ಕೆ ಅವಕಾಶವೇ ಇಲ್ಲ.

ದೇವರಿಗೆ ಸಲ್ಲುವ ಸೇವೆಗಳ ಸಂಖ್ಯೆ ಇಂತಿಷ್ಟೆ ಎಂದು ಪಟ್ಟಿ ಮಾಡಿ ಹೇಳಲಾಗುವುದಿಲ್ಲ, ಏಕೆಂದರೆ ಭಕ್ತರ ಬಗೆಯಂತೆ ಸೇವೆಗಳ ಸಂಖ್ಯೆಯೂ ಅಸಂಖ್ಯಾತ. ಕೆಲವು ಸೇವೆಗಳನ್ನು ಈಗ ಪರಿಚಯ ಮಾಡಿಕೊಳ್ಳಬಹುದು.

ಬಡಬಗ್ಗರು ನಡೆಸುವ ಸೇವೆಗಳನ್ನು ಸರಳ ಕಠಿಣ ಹಾಗೂ ವಿಶಿಷ್ಟ ಎಂದು ಮೂರು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು. ಇಂಥ ಸೇವೆಗಳನ್ನು ಕೆಲವು ಶ್ರೀಮಂತರೂ ನಡೆಸಬಹುದು. ಆದರೆ ಅವು ಅಂಥ ಶ್ರೀಮಂತರ ಭಕ್ತಿಗಿಂತ ಕೃಪಣತೆಗೆ ಸಾಕ್ಷಿಯಾಗಬಹುದು.

ಬಡವರು ನಡೆಸುವ ಸರಳ ಸೇವೆಗಳೆಂದರೆ ಅವು ದುಂದುವೆಚ್ಚದವುಗಳಲ್ಲ ಎಂಬುದಷ್ಟೇ ಅದರ ಅರ್ಥ. ಉದಾಹರಣೆಗೆ : ದೇವರ ಗುಡಿ ಮುಂದಿರುವ ಕೊಂಡಕ್ಕೆ ಗಂಧದ ಹುಡಿ, ಸಾಂಬ್ರಾಣಿಗಳನ್ನು ಹಾಕಿ, ಧೂಪದ ಸೇವೆ ಮಾಡುವುದು. ತೊಟ್ಟ ಬಟ್ಟೆ ಸಮೇತ ತೀರ್ಥದಲ್ಲಿ ಮಿಂದು ದೇವಾಲಯವನ್ನು ತಲುಪುವವರೆಗೂ ಹೆಜ್ಜೆಗೊಂದು ಸಲ ದೀರ್ಘದಂಡ ನಮಸ್ಕಾರ ಮಾಡುವುದು. ಹೆಜ್ಜೆ ನಮಸ್ಕಾರ ಸೇವೆ, ಒದ್ದೆ ಬಟ್ಟೆಯಲ್ಲಿ ದೇವಾಲಯದ ಸುತ್ತ ಉರುಳುವ ಉರುಳು ಸೇವೆ ಇದೇ ರೀತಿಯಲ್ಲಿ ಮಗ್ಗುಲಲ್ಲಿ ತೆವೆಳುವ ಒಚ್ಚಮಗ್ಗಲು ಸೇವೆ, ಪಂಜುಗಳನ್ನು ಹೊತ್ತಿಕೊಂಡು ಎತ್ತಿ ಬೆಳಗುತ್ತ ದೇವಾಲಯವನ್ನು ಪ್ರದಕ್ಷಿಣೆ ಬರುವ ಪತ್ತಿನ ಸೇವೆ ದೇವರ ವಾರಗಳಲ್ಲಿ ಉಪವಾಸವಿರುವುದು ಅಥವಾ ಏಲಕ್ಕಿಯನ್ನು ಮಾತ್ರ ಸೇವಿಸುವ ಯಾಲಕ್ಕಿ ಫಲಾರದ ಸೇವೆ, ಮುಡಿ ಒಪ್ಪಿಸಿ ದೇವರ ಸಿಸುಮಗನಾಗಿ ಸೇವೆ ಸಲ್ಲಿಸುವುದು, ದೇವರ ವಾಹನವನ್ನು ಹೊರುವುದು, ತೇರನ್ನು ಎಳೆಯುವುದು-ಮುಂತಾದವು ಬಡಬಗ್ಗರು ಮಾಡಬಹುದಾದ ಸರಳರೂಪದ ಸೇವೆಗಳು.

ಬಡಬಗ್ಗರೇ ಮಾಡುವ ಅತ್ಯಂತ ಕಠಿಣವಾದ ಸೇವೆಗಳು ಕೆಲವಿವೆ. ಅವು ಪವಾಡಗಳ ರೂಪದಲ್ಲಿದ್ದು, ಭಯ, ಭಕ್ತಿ, ಆಶ್ಚರ್ಯಗಳನ್ನು ಮೂಡಿಸುವಂಥವಾಗಿರುತ್ತವೆ. ಬಡವರಲ್ಲಿಯೂ ಇಂಥ ಸೇವೆಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ : ದಬ್ಬಳ ಗಾತ್ರದ ಸರಳುಗಳನ್ನು ಮೈತುಂಬ ಚುಚ್ಚಿಕೊಂಡ ತಮ್ಮಟೆಯ ಸದ್ದಿನ ಗತ್ತಿಗೆ ತಕ್ಕಂತೆ ಕುಣಿದು ದೇವರ ಸೇವೆಯನ್ನು ನೆರವೇರಿಸುವ ಸರಪಳಿ ಪವಾಡ, ಒಂದು ಕೆನ್ನೆಯ ಮುಖಾಂತರ ಚುಚ್ಚಿದ ಕತ್ತಿ ಮತ್ತೊಂದು ಕೆನ್ನೆಯ ಮುಖಾಂತರ ಹಾದುಬರುವಂತೆ ದೇವರ ಉತ್ಸವ ಮುಗಿಯುವವರೆಗೂ ಕತ್ತಿ ಚುಚ್ಚಿಕೊಂಡು ಮೌನವಾಗಿ ಸೇವೆ ಸಲ್ಲಿಸುವ ಕತ್ತಿ ಪವಾಡ. ಕಾರೆ, ನೆಗ್ಗಿಲು ಪಾಪಸುಕಳ್ಳಿ, ಬೆಳಸುಳ್ಳಿ, ಗೊಬ್ಬಳಿ ಮುಂತಾದ ಮುಳ್ಳುಗಳ ಹಾಸಿಗೆಯ ಮೇಲೆ ಉರುಳಾಡಿ ಸೇವೆ ಸಲ್ಲಿಸುವ ಮುಳ್ಳುಟ್ಟದ ಪವಾಡ, ಮುಳ್ಳಿನ ಹಾವುಗೆಯ ಮೇಲೆ ದಿನವಿಡೀ ನಿಂತು ಸೇವೆ ಸಲ್ಲಿಸುವ ಮುಳ್ಳಾವುಗೆ ಪವಾಡ. ಬಾಯಿಬೀಗದ ಸೇವೆ, ತಲೆಯ ಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವುದು, ಬೆನ್ನಿನ ಮಾಂಸಖಂಡಗಳಿಗೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ರಥವೆಳೆಯುವ ಸೇವೆ, ಕಲ್ಲುಕಂಬಕ್ಕೆ ಅಳವಡಿಸಿರುವ ರಾಟೆಯ ಕೊಕ್ಕೆಯನ್ನು ಬೆನ್ನಹುರಿ ಮೂಳೆಗೆ ಸಿಕ್ಕಿಸಿಕೊಂಡು ಸಿಡಿಯಾಡುವ ಸೇವೆ, ಧಗಧಗಿಸುತ್ತಿರುವ ಕೊಂಡವನ್ನು ಬರಿಗಾಲಲ್ಲಿ ಹಾದುಬರುವ ಸೇವೆ, ದೇವರ ಸೇವಾರ್ಥ ಜಾಗರಣೆ ಇರುವುದು. ದೇವರ ಹೆಸರಿನಲ್ಲಿ ದಿನವಿಡೀ ತಲೆಯನ್ನು ನೆಲದಲ್ಲಿ ಹೂತಿಟ್ಟು ತಲೆಕೆಳಗಾಗಿ ನಿಂತು ಸಲ್ಲಿಸುವ ಸೇವೆ ಮುಂತಾದವು.
ವಿಶಿಷ್ಟ ರೀತಿಯ ಸೇವೆಗಳಲ್ಲಿ ಕೆಲವು ವಿಚಿತ್ರವಾಗಿ ಕಂಡರೆ ಮತ್ತೆ ಕೆಲವು ಅಮಾನುಷವಾದವುಗಳೆನ್ನಬಹುದು. ದೇವರ ಪ್ರೀತ್ಯರ್ಥವಾಗಿ ನರಬಲಿ ಹಾಗೂ ಪ್ರಾಣಿಬಲಿಗಳನ್ನು ಕೊಟ್ಟು ಸೇವೆ ಸಲ್ಲಿಸುವ ರೀತಿ ಅಮಾನುಷವಾಗಿ ಕಂಡರೆ ವಿಚಿತ್ರ ಸೇವೆಗಳು ಹಲವಾರಿವೆ. ಕೆಲವು ದೇವರುಗಳಿಗೆ ಬಲಿ, ಆರಾಧನೆ, ಉತ್ಸವ ಎಲ್ಲ ನಡೆದರೂ ಆ ದೇವರಿಗೆ ತೃಪ್ತಿಕರವಾದ ಸೇವೆ ಆಗಿಯೇ ಇರುವುದಿಲ್ಲವಂತೆ. ಅದಕ್ಕಾಗಿ ಭಕ್ತರು ಅಶ್ಲೀಲಗೀತೆಗಳನ್ನು ಹಾಡಿ ಕುಣಿಯುತ್ತ ಆ ದೇವತೆಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ತಾವು ಬಯಸಿದ ಗಂಡ ದೊರೆತರೆ ಅಥವಾ ಮೈನೆರೆಯದ ಇದ್ದ ಹೆಣ್ಣು ನೆರೆದರೆ ಅಥವಾ ಮಕ್ಕಳಿಲ್ಲದೆ ಬಂಜೆಯಾಗಿದ್ದರೆ ಹೆಂಗಸು ತನ್ನ ಯೋನಿದ್ವಾರಕ್ಕೆ ಕತ್ತಿಯನ್ನು ಸಿಕ್ಕಿಸಿಕೊಂಡು ದೇವರು ಎದುರು ನರ್ತಿಸಿ ಸೇವೆಸಲ್ಲಿಸುವ ಪದ್ಧತಿಯೂ ಇದೆ. ತನ್ನ ಗಂಡನಿಂದ ಮಕ್ಕಳಾಗದೆ ಹೋದ ಹೆಂಗಸಿಗೆ ಪರಪುರುಷನಿಂದ ಗರ್ಭಾಧಾನ ಮಾಡಿಸುವ ತೇರಿನ ಪಟ್ಟಡಿ ಸೇವೆಯನ್ನು ನಿಮ್ನವರ್ಗದವರು ಇಂದಿಗೂ ಮುಡುಕುತೊರೆ ಬಿಳಿಗಿರಿ ಮುಂತಾದ ಯಾತ್ರಸ್ಥಳಗಳಲ್ಲಿ ನಡೆಸುತ್ತಾರೆ.

ದೇವಾಲಯದಲ್ಲಿ ತಿಂಗಾಳುನಗಟ್ಟಲೆ ಉಳಿದು ರಜ ಹೊಡೆಯುವುದು, ಮಕ್ಕಳಾಗಲೆಂದು ದೇವಾಲಯದ ಹಿಂದಿರುವ ಮರಕ್ಕೆ ಬೆಳ್ಳಿ ತೊಟ್ಟಿಲುಗಳನ್ನು ಕಟ್ಟಿ ತೂಗು ಬಿಡುವುದು, ಕೋಳಿ ಕೂಗುವ ಹೊತ್ತಿನಲ್ಲಿ ಬೆತ್ತಲೆಯಾಗಿ ಅರಳಿ ಮರವನ್ನು ಪೂಜಿಸಿ ಮೂರು ಪ್ರದಕ್ಷಿಣೆ ಬಂದು ಮರವನ್ನು ಅಪ್ಪಿಕೊಳ್ಳುವುದು ದೇವಾಲಯದ ಕಸ ಹೊಡೆದು ದೀಪ ಹಚ್ಚಿ ಗೀತ ನೃತ್ಯಗಳಿಂದ ದೇವರನ್ನು ಆರಾಧಿಸುವುದಕ್ಕಾಗಿಯೇ ದೇವದಾಸಿಯರಾಗಿ ತಮ್ಮನ್ನು ಒಪ್ಪಿಸಿಕೊಳ್ಳುವುದು ಮುಂತಾದವು ಸ್ತ್ರೀಯರೇ ಸಲ್ಲಿಸಬಹುದಾದ ಸೇವೆಗಳು.
ಜನಪದ ಧಾರ್ಮಿಕ ವೃತ್ತಿಗಾಯಕರು ನಿರ್ದಿಷ್ಟ ದಿನಗಳಲ್ಲಿ ಭಿಕ್ಷೆ ಮಾಡುವುದರಿಂದ ತಮ್ಮ ಕುಲದೇವತೆಯ ಸೇವೆಯನ್ನು ನೆರವೇರಿಸುತ್ತಾರೆ.

ನರ್ತನಸೇವೆ ದೇವದಾಸಿಯರಿಗೆ ಮಾತ್ರವೇ ಮೀಸಲಾದುದಲ್ಲ. ಪುರುಷರೂ ಭೂತನೃತ್ಯ, ವೀರಗಾಸೆ ನೃತ್ಯ, ಬೀಸುಕಂಸಾಳೆ ನೃತ್ಯ, ಪಟಕುಣಿತ, ಸೋಮನ ಕುಣಿತ, ಕೋಲಾಟ ಮುಂತಾದವುಗಳಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.
ಶ್ರೀಮಂತರು ಅನ್ನ ಸಂತರ್ಪಣೆ, ವಾಹನವೆತ್ತಿಸುವುದು (ಕುರುಜಿನ ಸೇವೆ), ಅಭಿಷೇಕ, ಅರವಟ್ಟಿಗೆ ಸೇವೆ ಮುಂತಾದ ದುಬಾರಿ ವೆಚ್ಚದ ಸೇವೆಗಳನ್ನು ಮಾಡುತ್ತಾರೆ. 

ಕೆಲವು ಸೇವೆಗಳು ಅಸಹ್ಯಕರವಾದವೂ ಹೌದು. ಪರಿಷೆ ಊಟ ಮಾಡಿರುವ ಎಂಜಲು ಎಲೆಗಳ ಮೇಲೆ ಉರುಳುರುಳುತ್ತ ಸೇವೆ ಸಲ್ಲಿಸುವ ರೀತಿ ಜುಗುಪ್ಸೆ ಹುಟ್ಟಿಸುತ್ತದೆ.

ಪೂಜಾ ಸಮಯಗಳಲ್ಲಿ ವಿವಿಧ ವಾದ್ಯಗಳನ್ನು ನುಡಿಸುವುದು, ಸಂಕೀರ್ತನರ ಮಾಡುವುದು, ಉತ್ಸವದ ಸಮಯದಲ್ಲಿ ಚತ್ರಿ, ಚಾಮರ, ಪತ್ತು ಮುಂತಾದವನ್ನು ಹಿಡಿದು ನಡೆಮಡಿ ಮೇಲೆ ಕರೆದು ತರುವ ಸೇವೆ, ಫಲ ಪುಷ್ಪ ಗಂಧ ಧೂಪ ದೀಪ ಮುಂತಾದವುಗಳಿಂದ ಆರಾಧಿಸುವುದು ದೇವರಿಗೂ ಮಂಚ ಹಾಸಿಗೆ ಮುಂತಾದ ವ್ಯವಸ್ಥೆ ಮಾಡುವ ಹಾಸುಗೀ ಸೇವೆ, ದೇವರ ಹೆಸರನ್ನು ತಮ್ಮ ಮಕ್ಕಳಿಗೆ ಇಡುವ ಸೇವೆ, ದೇವರ ಕಥೆಗಳನ್ನು ನಿರ್ದಿಷ್ಟ ದಿನಗಳಲ್ಲಿ ಓದಿಸುವ ಸೇವೆ, ಹಾಲರುವೀ ಸೇವೆ, ದೇವರ ಹೆಸರಿನಲ್ಲಿ ಬಸವನನ್ನು ಬಿಡುವ ಸೇವೆ, ಪ್ರತಿ ತಿಂಗಳೂ ಯಾತ್ರೆ ಹೋಗುವ ತಿಂಗಳು ಸೇವೆ, ದೀಪಾವಳಿಯಲ್ಲಿ ತಪ್ಪದೆ ಪ್ರತಿವರ್ಷವೂ ಬಂದು ಪೂಜೆ ಮಾಡಿಕೊಂಡು ಹೋಗುವ ದೀವುಳ್ಗೆ ಸೇವೆ, ದೇವರಿಗೆ ವಿವಿಧಾಭರಣಗಳನ್ನು ಒಪ್ಪಿಸುವ ಅಲಂಕರಣ ಸೇವೆ- ಹೀಗೆ ಬಗೆ ಬಗೆಯ ಸೇವೆಗಳಿಂದ ದೇವರುಗಳನ್ನು ತೃಪ್ತಿಪಡಿಸುತ್ತಾರೆ. ಹಾಸನ, ತುಮಕೂರು, ಮಂಡ್ಯ, ಮುಂತಾದ ಕಡೆಗಳಲ್ಲಿ ಹರಿಸೇವಾ ಎಂಬ ಉತ್ಸವವನ್ನು ಗ್ರಾಮದ ಜನ ಸಾಮೂಹಿಕವಾಗಿ ನಡೆಸುತ್ತಾರೆ.

ದೇವರ ಸೇವೆಗಳು ನಾಗರಿಕ ಅನಾಗರಿಕ ಜನಾಂಗಗಳೆರಡರಲ್ಲೂ ಕಂಡು ಬರುತ್ತವೆ. ಆದರೆ ಅನಾಗರಿಕ ಸಮಾಜದಲ್ಲಿರುವ ನಂಬಿಕೆ, ಆಚರಣೆ, ಹರಕೆ- ಅವುಗಳ ಹಿನ್ನೆಲೆಯಲ್ಲಿ ನಡೆಯುವ ಸೇವೆಗಳು ವಿಚಿತ್ರವಾಗಿವೆ, ವೈವಿಧ್ಯಮಯವಾಗಿವೆ. ಅವುಗಳಲ್ಲಿ ಕೆಲವು ಪರಂಪರೆಯ ಪಳಯುಳಿಕೆಗಳಾಗಿದ್ದರೆ ಕೆಲವು ಮನೋರಂಜನೆಯ ಸಾಧನಗಳೂ ಆಗಿವೆ. ದೇವರ ಕಲ್ಪನೆಯಿಂದ ದೇವರಿಗೆ ಸಲ್ಲಿಸುವ ಸೇವೆಗಳಿಂದ ಮನಃಶಾಂತಿ ಸಂತೃಪ್ತಿಮುಂತಾದ ಉಪಯೋಗಗಳು ದೊರೆಯಬಹುದಾದರೂ ಕೆಲವು ಸೇವೆಗಳು ಅತಿರೇಕ ಹಾಗೂ ಅರ್ಥಹೀನವಾಗಿ ಕಾಣಿಸುತ್ತವೆ. ಮತ್ತೆ ಕೆಲವು ಸಾಮಾನ್ಯ ಜನತೆಯನ್ನು ಪೌರೋಹಿತ ವರ್ಗ ಶೋಷಣೆ ಮಾಡುವುದಕ್ಕೂ ಕಾರಣವಾಗಿವೆ. ಆದರೆ ದೇವರ ಬಗ್ಗೆ ಅಪಾರ ಶ್ರದ್ಧೆ ಭಯ ಭಕ್ತಿಗಳನ್ನಿಟ್ಟಿರುವ ಮುಗ್ಧ ಜನತೆಗೆ ಈ ಯಾವ ಸೇವೆಗಳೂ ಕಷ್ಟಕರವೂ ಅಲ್ಲ ನಷ್ಟದಾಯಕವೂ ಅಲ್ಲ.
(ಪಿ.ಕೆ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ